ಆನೇಕಲ್ ನಾಗರೀಕ ವೇದಿಕೆ ಅಂತರ್ಜಾಲ ತಾಣಕ್ಕೆ ಸರ್ವರಿಗೂ ಸುಸ್ವಾಗತ

ANV


I made this widget at MyFlashFetish.com.

Sunday, June 5, 2011

ಲಕೋಟೆ ಸಂಸ್ಕೃತಿ

ಸಾಮಾನ್ಯವಾಗಿ ನಾವು ಯಾವುದಾದರೂ ಸರಕಾರಿ ಕಛೇರಿಯನ್ನು ಪ್ರವೇಶಿಸುತ್ತಿದ್ದಂತೆಯೇ ಕೆಲವು ಘೋಷಣೆಗಳನ್ನು ಕಾಣಬಹುದು. ‘ಸರಕಾರದ ಕೆಲಸ ದೇವರ ಕೆಲಸ, ಇಲ್ಲಿ ಲಂಚಕ್ಕೆ ಅವಕಾಶವಿಲ್ಲ. ಲಂಚದ ಆಮಿಷ ಬಂದರೆ ದೂರು ನೀಡಿ, ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ.....’ ಇತ್ಯಾದಿ.... ಇತ್ಯಾದಿ....
ಇಂತಹ ಘೋಷಣೆಗಳು ಲಂಚ ಕೊಡಲೇಬೇಕು ಎಂಬುದನ್ನು ನೆನಪಿಸುತ್ತವೆ ಎಂಬುದು ಬೇರೆಯೇ ಮಾತು. ಈಗೀಗ ಲೋಕಾಯುಕ್ತ ದಾಳಿಯ ಭಯದಿಂದ ಕೆಲವು ಹೊಸ ವ್ಯವಸ್ಥೆಗಳನ್ನೂ ಮಾಡಲಾಗಿದೆ.
‘ಕಾಂಚಾಣಂ ಕಾರ್ಯಸಿದ್ಧಿ’ ಎಂಬಂತೆ ನಾನು ಇತ್ತೀಚೆಗೆ ನಡೆದ ಒಂದು ಘಟನೆ ಹೇಳುತ್ತೇನೆ. ನನ್ನ ತಂದೆಯವರು ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪಿಂಚಣಿ ಪಡೆಯಲು ಜಿಲ್ಲಾ ಖಜಾನೆಗೆ ಹೋದೆ. ಅಲ್ಲಿಯ ಗುಮಾಸ್ತರು ಹೇಳಿದ ರೀತಿಯಲ್ಲಿ ಎಲ್ಲಾ ಕಾಗದ ಪತ್ರಗಳನ್ನು ಹಾಜರುಪಡಿಸಿ ಇನ್ನೇನು ಎಲ್ಲಾ ಕೆಲಸಗಳು ಮುಗಿದು ಖಜಾನೆ ಇಲಾಖೆಯಿಂದ ಕಾಗದಪತ್ರ ಬ್ಯಾಂಕಿಗೆ ಹೋಗುವುದೊಂದೇ ಬಾಕಿ. ಅಂತಿಮವಾಗಿ ಜಿಲ್ಲಾ ಖಜಾನಾಧಿಕಾರಿಯ ಹಸ್ತಾಕ್ಷರ ಬೀಳಬೇಕು ಅಷ್ಟೇ. ಈ ಹಂತದಲ್ಲಿ ನಮ್ಮ ಫೈಲು ಮುಗ್ಗರಿಸಿತು. ಎರಡು ದಿನವಾದರೂ ಫೈಲು ‘ಸಾಹೇಬ’ನ ಟೇಬಲ್ ಮೇಲೆ ಮಲಗಿತ್ತು.
ನಾಲ್ಕೈದು ದಿನ ಈ ಕಛೇರಿಗೆ ತಿರುಗಿ ತಿರುಗಿ ಬೇಸತ್ತ ನಾವು ಗುಮಾಸ್ತನ ಟೇಬಲ್ ಗೆ ಎಡತಾಕಿದೆವು. ಆತನ ಕೈಯಿಂದ ಮೂರು ಲಕೋಟೆಗಳು ಹೊರಬಂದವು. ‘ಒಂದರಲ್ಲಿ ಎಂಟು ನೂರು ಇಡಿ, ಅದು ಲೆಕ್ಕಾಧೀಕ್ಷಕರದ್ದು; ಇನ್ನೊಂದು ಸಾವಿರ ಇಡಿ, ಅದನ್ನು ನನ್ನದು; ದೊಡ್ಡ ಲಕೋಟೆಯಲ್ಲಿ ಆರು ನೂರು ಇಡಿ, ಅದು ನಮ್ಮ ಸಾಹೇಬರದ್ದು’ ಎಂದು ಹೇಳಿದ. ಅರ್ಧಗಂಟೆ ಬಿಟ್ಟು ಬಂದರೆ ನಿಮ್ಮ ಕೆಲಸ ಆಗುತ್ತದೆ, ಪಿಂಚಣಿಯ ಕಾಗದ ಪತ್ರ ನಿಮ್ಮ ಕೈಸೇರುತ್ತದೆ ಎಂದ ಆ ಭೂಪ.
ಅಂತೆಯೇ ಇನ್ನೇನು ಮಾಡುವುದೆಂದು ಮೂರು ಲಕೋಟೆ ತುಂಬಿಸಿ ಗುಮಾಸ್ತನ ಕೈಗೆ ಕೊಟ್ಟ. ಐದೇ ನಿಮಿಷದಲ್ಲಿ ನಮ್ಮ ಕಾಗದ ಪತ್ರಗಳು ನಮ್ಮ ಕೈ ಸೇರಿದವು. ಆಗಲೇ ಇನ್ನೊಬ್ಬ ನಿವೃತ್ತ ಸರಕಾರಿ ನೌಕರ ಬಂದರು. ಅವರ ಮುಂದೆಯೂ ಮೂರು ಲಕೋಟೆಗಳು ಪ್ರತ್ಯಕ್ಷವಾದವು. ಇದು ಗೂಂಡಾ ಸಂಸ್ಕೃತಿ, ಬಾರ್ ಸಂಸ್ಕೃತಿ ಇತ್ಯಾದಿಯಾಗಿ ಇರುವ ಹಲವಾರು ಭಾರತೀಯ ಸಂಸ್ಕೃತಿಗಳಲ್ಲಿ ಒಂದು. ಇದರ ಹೆಸರು ಲಕೋಟೆ ಸಂಸ್ಕೃತಿ!
ಜಲ್ದಿ ಎರ್ಡ್ ಗಿರ್ಮಿಟ್ ಹಾಕ್ರಿ!
ನಿತ್ಯ ಜೀವನದಲ್ಲಿ ತಮ್ಮ ಆಹಾರ, ಆಚಾರ, ವಿಚಾರ, ಭಾಷೆ, ಉಡುಗೆ-ತೊಡುಗೆಗಳಲ್ಲಿ, ಶಬ್ದ ಪ್ರಯೋಗದಲ್ಲಿ ಎಷ್ಟೊಂದು ವ್ಯತ್ಯಾಸಗಳನ್ನು ಕಾಣಬಹುದು! ನಮ್ಮ ಪಕ್ಕದ ಜಿಲ್ಲೆಯಲ್ಲೇ ಏಕೆ ನಮ್ಮ ಪಕ್ಕದ ತಾಲ್ಲೂಕುಗಳಲ್ಲಿಯೇ ಭಿನ್ನತೆ ಇರುತ್ತದೆ. ಊರಿನಿಂದ ಊರಿಗೆ ಹೋದರೂ, ಭಾಷೆ, ಆಚಾರ ವಿಚಾರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.
ಧಾರವಾಡದಲ್ಲಿ ಒಂದು ತರಬೇತಿಗೆ ಹೋಗಿದ್ದೆ. ಅಲ್ಲಿಯ ಕೆಲವು ಶಬ್ದ ಪ್ರಯೋಗಗಳು ನಮ್ಮ ಆಡು ಬಳಕೆಯ ಮಾತಿಗೆ ವ್ಯತಿರಿಕ್ತವಾಗಿದ್ದುದರಿಂದ ನಾನು ಕೆಲ ಹೊತ್ತು ಸಂಕಟಕ್ಕೀಡಾಗಬೇಕಾಯಿತು. ಮಾತು ಅದೇ, ಆದರೆ ಅರ್ಥ ಬೇರೆ!
ಒಂದು ಹಳ್ಳಿ. ಅಲ್ಲಿ ಸಮೀಕ್ಷಾ ಕಾರ್ಯ. ಗ್ರಾಮಸ್ಥರೊಂದಿಗೆ ಮಾತುಕತೆಗೆ ತೊಡಗಿದಾಗ ಆಗ ತಾನೇ ಪೇಟೆಯಿಂದ ವ್ಯಕ್ತಿಯೊಬ್ಬರು ಬಂದರು. ಬಂದವರು ತಾನು ಗ್ರಾಮ ಪಂಚಾಯಿತಿ ಸದಸ್ಯರೆಂದು ಪರಿಚಯಿಸಿಕೊಂಡರು. ಪಂಚಾಯಿತಿ ಸದಸ್ಯರೆಂದ ಮೇಲೆ ನಮಗೆ ಹತ್ತಿರದವರೇ. ನಮ್ಮ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಉಪಗ್ರಹ ಆಧರಿತ ತರಬೇತಿ ಪಡೆಯುತ್ತಿದ್ದಾರೆಂದ ಮೇಲೆ ಆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನಮ್ಮಂತವರಿಗೆ ಖಂಡಿತವಾಗಿಯೂ ಹತ್ತಿರದವರು. ನಾನು ಬೇರೆ ಜಿಲ್ಲೆಯವನೆಂಬ ಅಳುಕು ಇದ್ದರೂ ನಾವೆಲ್ಲಾ ಒಂದೇ ಎಂಬ ಭಾವನಾತ್ಮಕ ಸಂಬಂಧ.
ಈ ಮೇಲೆ ಹೇಳಿದ ಪಂಚಾಯಿತಿ ಸದಸ್ಯರ ಜತೆ ಮಾತನಾಡುತ್ತಾ ಹೊರಗೆ ಬಂದಾಗ ಅವರು ಪಕ್ಕದ ಅಂಗಡಿಯೊಂದಕ್ಕೆ ನಮ್ಮನ್ನು ಕರೆದೊಯ್ದರು. ಇಲ್ಲಿಯ ವಿಶೇಷ ಒಂದಿದೆ. ಅದನ್ನು ಕೊಡಿಸ್ತೇನೆ ಅಂದವರೇ, “ಜಲ್ದಿ ಎರ್ಡ್ ಗಿರ್ಮಿಟ್ ಹಾಕ್ರಿ” ಎಂದು ದೊಡ್ಡ ಧ್ವನಿಯಲ್ಲಿ ಹೇಳಿದರು.
ಈ ‘ಗಿರ್ ಮಿಟ್’ ಎಂಬ ಶಬ್ದ ನನ್ನ ಕಿವಿಗೆ ಬೀಳುತ್ತಲೇ ನನ್ನ ಮೈಯಲ್ಲಿ ಒಂದು ಕಂಪನ ಶುರುವಾಯಿತು. ನಮ್ಮ ಹಳ್ಳಿಯಲ್ಲಿ ಇದರ ಅರ್ಥ ‘ಎರಡು ಹೊಡಿ’ ಎಂದು! ಸ್ವಲ್ಪ ಸಾವರಿಸಿಕೊಂಡು ನೋಡಿದಾಗ ಈ ಚಹಾ ಅಂಗಡಿಯಲ್ಲಿ ಏನಾದರೂ ವಿಶೇಷವಿರಬೇಕೆಂದು ಅನಿಸಿತು. ಅಂಗಡಿಯವನು ಎರಡು ಬಟ್ಟಲಲ್ಲಿ ಮಸಾಲೆ ಮಂಡಕ್ಕಿ (ದಕ್ಷಿಣ ಕನ್ನಡದ ಕಡೆಯಲ್ಲಿ ಚರುಂಬುರಿ ಎಂದು ಹೇಳುತ್ತಾರೆ) ತಂದಿಟ್ಟ. ಪ್ಲೇಟಿನಲ್ಲಿ ಉದ್ದಕ್ಕೆ ಕತ್ತರಿಸಿದ ಎರಡು ಮೆಣಸಿನಕಾಯಿ ಬೇರೆ!
ಅದು ಒಂದು ರೀತಿಯ ಪಾಠವೇ ಆಯಿತು. ಈ ರೀತಿಯಲ್ಲಿ ಎಷ್ಟೋ ಪದಪ್ರಯೋಗಗಳು ಅಪಾರ್ಥಕ್ಕೆ ಕಾರಣವಾಗುತ್ತದೆ. ಜಗಳವಾಡುತ್ತೇವೆ. ಆದರೆ ನಿಜವಾಗಿಯೂ ಭಾಷೆಯ ಉದ್ದೇಶ ನನ್ನ ಮನಸ್ಸಿನಲ್ಲಿ ಇರುವುದನ್ನು ನಿಮಗೆ ತಿಳಿಸುವುದು ಮತ್ತು ನೀವು ಹೇಳಿದ್ದನ್ನು ನಾನು ಅರ್ಥಮಾಡಿಕೊಳ್ಳುವುದು ಅಷ್ಟೇ ಅಲ್ಲವೇ?
http://www.saluhejje.com/jeevana.htm

No comments:

Post a Comment